Sodematha

"ಮನೆ ಮನೆಗಳಲ್ಲಿ ಶ್ರೀಲಕ್ಷ್ಮೀ ಶೋಭಾನೆ ಪಠಣ ಯಜ್ಞ"

09 Dec, 2019

"ಮನೆ ಮನೆಗಳಲ್ಲಿ ಶ್ರೀಲಕ್ಷ್ಮೀ ಶೋಭಾನೆ ಪಠಣ ಯಜ್ಞ"
ಬೆಂಗಳೂರಿನ  ಉತ್ತರ ವಲಯದ ಭಜನಾಮಂಡಳಿಯವರಿಗಾಗಿ ಈ ಅಭಿಯಾನದ ಚಾಲನಾ ಕಾರ್ಯಕ್ರಮವನ್ನು ಮತ್ತಿಕೆರೆ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಡಿಸಂಬರ್ 5, ಗುರುವಾರದಂದು  ಸೋದಾ ಮಠಾಧೀಶರಾದ  ಶ್ರೀಶ್ರೀವಿಶ್ವವಲ್ಲಭತೀರ್ಥಶ್ರೀಪಾದಂಗಳವರು ನೆರೆವೇರಿಸಿದರು.   ಶ್ರೀರಾಘವೇಂದ್ರಸ್ವಾಮಿ ಮಠದ ಆಡಳಿತ ಮಂಡಳಿಯವರು ಪೂರ್ಣಕುಂಭದೊಡನೆ ಶ್ರೀಪಾದಂಗಳವರನ್ನು  ಬರಮಾಡಿಕೊಂಡು   ಆದರದ ಸ್ವಾಗತ ಕೋರಿದರು.  ಶ್ರೀಮತಿ ಡಾ॥ ವಿಜಯಲಕ್ಷ್ಮಿಯವರು ತಮ್ಮ ಸ್ವಾಗತಭಾಷಣದಲ್ಲಿ ಶ್ರೀಶ್ರೀ ವಿಶ್ವೋತ್ತಮತೀರ್ಥಶ್ರೀಪಾದಂಗಳವರ ಕಾರುಣ್ಯವನ್ನು ನೆನೆಯುತ್ತಾ, ಇದೀಗ ಅವರ ವರಕುಮಾರರ ಅನುಗ್ರಹದಿಂದ ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸುತ್ತಿರುವುದಕ್ಕಾಗಿ  ಹೃತ್ಪೂರ್ವಕ ಪ್ರಣಾಮಗಳನ್ನು ಸಲ್ಲಿಸಿದರು. ಮಠದ ವಿದ್ವಾಂಸರಾದ ಶ್ರೀವೇಂಕಟೇಶ ಕುಲಕರ್ಣಿಯವರು ಮಾತನಾಡಿ ಶ್ರೀಲಕ್ಷ್ಮೀಶೋಭಾನೆ ಮದುಮಕ್ಕಳಿಗೆ ಮಾತ್ರವಲ್ಲ, ಎಲ್ಲಾ ವಯೋಮಾನದವರಿಗೂ  ಸಂಜೀವಿನಿ ಔಷದದಂತೆ ಹೊಸ ಚೇತನ ನೀಡುತ್ತದೆ ಎಂದು ತಿಳಿಸಿಕೊಟ್ಟರು. ಶ್ರೀಪಾದಂಗಳವರು  ತಮ್ಮ ಅನುಗ್ರಹ ಸಂದೇಶದಲ್ಲಿ ಶ್ರೀವಾದಿರಾಜರು ಸಮಾಜಕ್ಕೆ ನೀಡಿದ ತೀರ್ಥಪ್ರಬಂಧ, ಶ್ರೀಲಕ್ಷ್ಮೀಶೋಭಾನೆ ಇತ್ಯಾದಿಗಳ ಮಹತ್ವವನ್ನು ತಿಳಿಸಿಕೊಡುತ್ತಾ, ಅತೀಸುಲಭದಲ್ಲಿ ಹೆಚ್ಚಿನ ಪ್ರಯೋಜನ ಪಡೆಯುವ  ಉಪಾಯಗಳನ್ನು ನಮಗೆ ನೀಡಿದ ಶ್ರೀವಾದಿರಾಜರಿಗೆ ಎಲ್ಲರೂ ಕೃತಜ್ಞತೆ ಸಲ್ಲಿಸಬೇಕು ಎಂದು ಕರೆನೀಡಿದರು. ನಂತರ  ಭಜನಾಮಂಡಳಿಯವರಿಗೆ ಶ್ರೀಹಯಗ್ರೀವ ದೇವರ  ಮತ್ತು ಶ್ರೀವಾದಿರಾಜರ ಚಿತ್ರದೊಂದಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಹರಸಿದರು.