ಕುಂಬ್ರಿಗೆ ಸೋದೆ ಶ್ರೀಗಳು;
ಹಳ್ಳಿ ಪುನರ್ ನಿರ್ಮಾಣದ ವಿಶ್ವಾಸ
ಶಿರಸಿ: ಉಡುಪಿ ಅಷ್ಟ ಮಠಗಳಲ್ಲಿ ಒಂದಾದ ತಾಲೂಕಿನ ಸೋದೆಯ ವಾದಿರಾಜ ಮಠದ ಯತಿ ಶ್ರೀ
ವಿಶ್ವವಲ್ಲಭ ತೀರ್ಥ ಶ್ರೀಪಾದರು ಮಳೆ ಹಾಗೂ ಅತಿಯಾದ ನೆರೆಗೆ ಬಳಿದು ಹೋದ ಯಲ್ಲಾಪುರದ
ತಾಲೂಕಿನ ಮಂಚಿಕೇರಿ ಪಂಚಾಯ್ತಿಯ ಸೋಮನಳ್ಳಿ ಗ್ರಾಮದ ಕುಂಬ್ರಿ ಹಳ್ಳಿಗೆ ಭೇಟಿ ನೀಡಿ ಸ್ಥಳೀಯ ನಾಗರೀಕರ ಜೊತೆ ಸಮಾಲೋಚನೆ ನಡೆಸಿದರು.
ಈವರೆಗೆ ಚಾತುರ್ಮಾಸ್ಯ ವೃತಾಚರಣೆಯಲ್ಲಿದ್ದ ಶ್ರೀಗಳು, ಮಠದಿಂದ ಈಗಾಗಲೇ ದತ್ತು
ತೆಗೆದುಕೊಂಡ ಕುಂಬ್ರಿ ಹಳ್ಳಿಗೆ ಭೇಟಿ ನೀಡಿ ಅಲ್ಲಿನ ಅನಾಹುತಗಳನ್ನು ವೀಕ್ಷಿಸಿದರು.
ಸಂಪೂರ್ಣ ಮನೆ ಕಳೆದುಕೊಂಡ ಬಡ ಕುಣಬಿಗಳಿಗೆ ಮನೆಯ ನಿರ್ಮಾಣ ಕಾರ್ಯವನ್ನು
ಸ್ಥಳೀಯರ ವಿಶ್ವಾಸ ಪಡೆದೇ ದೀಪಾವಳಿಯ ಬಳಿಕ ನಿರ್ಮಾಣ ಮಾಡಿಕೊಡುವ ಇಂಗಿತ
ವ್ಯಕ್ತಪಡಿಸಿದರು.
ಗ್ರಾಮದಲ್ಲಿನ ಎರಡೂ ಪಾರ್ಶ್ವದ ಮನೆಗಳ ಹಾನಿಯನ್ನು ವೀಕ್ಷಣೆ ಮಾಡಲು ಕಿಲೋಮೀಟರ್ ತನಕ ನಡೆದು ಹೋದರು. ಸ್ಥಳೀಯರೂ ಅತ್ಯಂತ ಪ್ರೀತಿ, ಭಕ್ತಿಯಿಂದ ಶ್ರೀಗಳನ್ನು ಬರಮಾಡಿಕೊಂಡರು. ಈಗಾಗಲೇ ಒದಗಿಸಲಾದ ಕುಡಿಯುವ ನೀರಿನ ಯೋಜನೆಯನ್ನೂ ಯತಿಗಳು
ಪರಿಶೀಲಿಸಿದರು.
ಈ ವೇಳೆ ಆರ್ಶೀಚನ ನುಡಿದ ಶ್ರೀಗಳು, ಸ್ಥಳೀಯ ನಿರಾಶ್ರಿತರಿಗೆ ಅಭಯದ ಮಾತುಗಳನ್ನು ಆಡಿದರು. ಕಷ್ಟ ಬಂದಿದೆ ಎಂದು ಆತಂಕಕ್ಕೊಳಗಾಗಬಾರದು. ಸುಖ ಬರಬೇಕಿದ್ದರೆ ಕಷ್ಟ ಬಂದೇ
ಬರುತ್ತದೆ. ಒಂದು ನಾಣ್ಯದ ಎರಡು ಮುಖಗಳು ಅವು. ಕಷ್ಟ ಹಾಗೂ ಸುಖವನ್ನು ಸಮವಾಗಿ ಸ್ವೀಕರಿಸಬೇಕು. ಕಷ್ಟಕ್ಕೆ ಯಾವತ್ತೂ ಹೆದರಬೇಡಿ. ಕಷ್ಟದ ಬಳಿಕ ಸುಖವಿದೆ. ಆತ್ಮವಿಶ್ವಾಸದಿಂದ ಬದುಕು ನಡೆಸಬೇಕು ಎಂದರು. ದೇವರು ಸುಖದ ಜೊತೆಗೆ ಕಷ್ಟವನ್ನೂ ಕಷ್ಟದ ಜೊತೆ ಸುಖವನ್ನೂ ನೀಡುತ್ತಾನೆ. ದೇವರನ್ನು
ನಂಬಿದರೆ ರಕ್ಷಣೆ ಸಿಗುತ್ತದೆ ಎಂದೂ ಶ್ರೀಗಳು ಹೇಳಿದರು.
ಈ ವೇಳೆ ಮಠದ ವ್ಯವಸ್ಥಾಪಕ ಮಾಣಿಕ್ಯ ಉಪಾಧ್ಯಾಯ ಹಾಗೂ ಕಂಪ್ಲಿ ಪಂಚಾಯ್ತಿ ಅಧ್ಯಕ್ಷರು ಇತರ ಜನಪ್ರತಿನಿಧಿಗಳು, ಮುಖಂಡರೂ ಇದ್ದರು.